ಲೇಬರ್ ಕಾಂಟ್ರಾಕ್ಟರ್ ವೇಷದಲ್ಲಿದ್ದಾರೆ ವಂಚಕರು, ಎಚ್ಚರವಹಿಸಿ!























ಮಂಗಳೂರು ಸೇರಿದಂತೆ ಕರ್ಣಾಟಕದಲ್ಲಿ ಕಾರ್ಮಿಕ ಕೆಲಸಗಳಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಕಾರ್ಮಿಕರ ಬೇಡಿಕೆಯನ್ನೇ ಬಂಡವಾಳವಾಗಿಸಿಕೊಂಡು ಲಕ್ಷಾಂತರ ರುಪಾಯಿಗಳನ್ನು ವಂಚಿಸುವ ಜಾಲಗಳು ಹುಟ್ಟಿಕೊಂಡಿವೆ. ಇಂತಹ ವಂಚನೆಗೆ ಸಿಲುಕಿ ರಮೇಶ್ ಲಾಯದಗುಂಡಿ ಎಂಬುವವರು ಸುಮಾರು ಒಂದೂವರೆ ಲಕ್ಷ ರುಪಾಯಿಗಳನ್ನು ಕಳೆದುಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೂಲತಃ ಬಾದಾಮಿ ಜಿಲ್ಲೆಯವರಾದ ರಮೇಶ ಲಾಯದಗುಂಡಿ ಎಂಬವರು ಮಂಗಳೂರಿನಲ್ಲಿ ಗೇಲ್ ಗ್ಯಾಸ್ ಪೈಪ್'ಲೈನ್ ಹಾಕಲು ಗುಂಡಿ ತೋಡುವ ಕೆಲಸವನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡಿದ್ದು, ಚಿತ್ರದುರ್ಗ ನಿವಾಸಿಯಾದ ನಾಗರಾಜ್ ಎಂಬವರಿಗೆ ಈ ಕೆಲಸವನ್ನು ಲೇಬರ್ ಕಾಂಟ್ರಾಕ್ಟ್ ಮೇಲೆ ಕೊಟ್ಟಿದ್ದರು.

ನಾಗರಾಜ್ ಎಂಬಾತನು ತನ್ನನ್ನು ಲೇಬರ್ ಕಾಂಟ್ರಾಕ್ಟರ್ ಎಂದು ಪರಿಚಯಿಸಿಕೊಂಡಿದ್ದು ತನ್ನ ಬಳಿ 30 ಜನ ಕೆಲಸಗಾರರು ಇರುವುದಾಗಿ ಹೇಳಿ ರಮೇಶ್ ಅವರನ್ನು ನಂಬಿಸಿ, ಇನ್ನೂ ಹೆಚ್ಚು ಮಂದಿ ಕೆಲಸಗಾರರನ್ನು ಕರೆತರುವುದಾಗಿ ಹೇಳಿ ಅವರಿಂದ ರುಪಾಯಿ 1,50,000/- ವನ್ನು ಅಡ್ವಾನ್ಸ್ ಮೊತ್ತವಾಗಿ ಪಡೆದುಕೊಂಡಿರುತ್ತಾನೆ. ಮೂರು ದಿನ ಹತ್ತು ಕೆಲಸಗಾರರನ್ನು ಇಟ್ಟುಕೊಂಡು ಅಲ್ಪ-ಸ್ವಲ್ಪ ಕೆಲಸ ಮಾಡಿ, ಎಪ್ರಿಲ್ ಇಪ್ಪತ್ತು ಮುಂಜಾನೆಯಂದು ತನ್ನ ಹೆಂಡತಿ, ಮಕ್ಕಳು ಹಾಗೂ ಇತರ ಕೆಲಸಗಾರರೊಂದಿಗೆ ಕೂಳೂರು ಸಮೀಪದಲ್ಲಿ ಅವರಿಗೆ ನೀಡಲಾಗಿದ್ದ ವಾಸಸ್ಥಾನದಿಂದ ಪರಾರಿಯಾಗಿರುತ್ತಾನೆ.


ಆ ಬಳಿಕ ಹಲವು ದಿನಗಳ ಕಾಲ ಮೊಬೈಲ್ ಸ್ವಿಚ್'ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದ ನಾಗರಾಜನ ಮೇಲೆ ರಮೇಶ್ ಅವರು ಮೇ ಎರಡು ತಾರೀಖಿನಂದು ಮಂಗಳೂರು ಉರ್ವಾ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಆನಂತರ ಪೊಲೀಸರು ಆತನನ್ನು ಸಂಪರ್ಕಿಸಿದ್ದು ಆತನ ವಿರುಧ್ಧ ದೂರು ದಾಖಲಾದ ಬಗ್ಗೆ ಮಾಹಿತಿಯನ್ನು ನೀಡಿದ್ದು, ಆ ವೇಳೆಗೆ ತನ್ನ ಬಳಿ ದುಡ್ಡು ಇಲ್ಲವೆಂದೂ ರುಪಾಯಿ 85,000 ಮಾತ್ರವೇ ಕೊಡಲು ಸಾಧ್ಯವೆಂದು ಒಪ್ಪಿಕೊಂಡಿದ್ದು, ದುಡ್ಡು ಮರುಪಾವತಿಸಲು ದಿನಾಂಕವನ್ನೂ ಅವನೇ ನಿಗದಿಪಡಿಸಿರುತ್ತಾನೆ. ಆದರೆ ಆ ಬಳಿಕವೂ ದುಡ್ಡನ್ನು ಮರಳಿಸದೇ, ಫೋನ್ ಕರೆಗಳನ್ನೂ ಉತ್ತರಿಸದೇ ಮತ್ತೆ ತಪ್ಪಿಸಿಕೊಂಡಿರುತ್ತಾನೆ.


 ನಾಗರಾಜನ ಮೊಬೈಲ್ ಸಂಖ್ಯೆ : 7760062935. ಈತನ ಕುರಿತು ಈತನ ಊರಿನಲ್ಲಿ ಹಾಗೂ ಇತರೆಡೆಗಳಲ್ಲಿ ವಿಚಾರಿಸಿದಾಗ, ಈತ ಹೀಗೆ ದುಡ್ಡು ವಂಚನೆ ಮಾಡಿ ಓಡಿ ಹೋಗಿರುವುದು ಇದೇ ಮೊದಲ ಸಲ ಅಲ್ಲವೆಂದೂ, ಈ ಹಿಂದೆಯೂ ಇದೇ ರೀತಿಯಾಗಿ ಹಲವರನ್ನು ವಂಚಿಸಿರುವುದಾಗಿ ತಿಳಿದು ಬಂದಿದೆ. ಹೀಗೆ ವಂಚನೆ ಮೂಲಕ ಗಳಿಸಿಕೊಂಡ ದುಡ್ಡಿನಿಂದ ಈತನು ವಾಹನಗಳನ್ನು ಖರೀದಿಸುತಿದ್ದು ಬೆಂಗಳೂರು ಸೇರಿದಂತೆ ಇತರ ಊರುಗಳಲ್ಲಿ ಈತನ ಹೆಸರಿನಲ್ಲಿ ಹಲವು ಟ್ಯಾಕ್ಸಿ ಕಾರು ಹಾಗೂ ಆಟೋ ರಿಕ್ಷಾಗಳು ಇರುವುದಾಗಿ ತಿಳಿದು ಬಂದಿದೆ. ಒಟ್ಟಾಗಿ, ಈತನು ಕೇವಲ ಜನರನ್ನು ವಂಚಿಸುವ ಸಲುವಾಗಿ ಲೇಬರ್ ಕಾಂಟ್ರ್ಯಾಕ್ಟರ್ ಎಂಬುದಾಗಿ ನಂಬಿಸುತಿದ್ದು ಈತನ ವಂಚನೆಯ ಜಾಲವು ಬೇರೆಯೇ ಇರುವುದಾಗಿ ತಿಳಿದುಬಂದಿದೆ.  

 ಗುತ್ತಿಗೆದಾರರು ಈತನ ಕುರಿತು ಎಚ್ಚರಿಕೆಯಿಂದಿದ್ದು, ಈತನಿಗೆ ಯಾವುದೇ ಕೆಲಸ ನೀಡುವ ಮೊದಲು ಅದರಲ್ಲೂ ಯಾವುದೇ ರೀತಿಯ ಅಡ್ವಾನ್ಸ್ ಹಣವನ್ನು ನೀಡುವ ಕುರಿತು ಜಾಗರೂಕರಾಗಿರಲಿ ಎಂಬ ಹಿತಾಸಕ್ತಿಯಿಂದ ಇದನ್ನು ಪ್ರಕಟಿಸಲಾಗಿದೆ. 

Comments